Monday, December 14, 2015

ಯಾರಿಗೂ ಬೇಡವಾದ ಕಥೆ

ಯಾರಿಗೂ ಬೇಡವಾದ ಕಥೆ

ಅವ್ನು ಯಾರು .. ?  "ಗೊತ್ತಿಲ್ಲ",  ಊರು, ಕೇರಿ, ಜಾತಿ, ಧರ್ಮ ಯಾವ್ದೋ ಗೊತ್ತಿಲ್ಲ .ರೈಲ್ವೆ ಸ್ಟೇಷನ್ ರಸ್ತೇ ಕೊನೇಲ್  ಮುರ್ದುಬಿದ್ದೊಗಿದ್ದು ಅವನ್ಮನೆ. ಅವನ್ದು ಇಡ್ಲಿ ವ್ಯಾಪಾರ , ಮೇನ್ ರೋಡ್ ಕಛೇರಿ ಕುಂಟೆಯ ಬದಿಲಿರೋ ಬಂಡೀಲಿ. ಅವಳು ಅವನ ಹೆಂಡತಿ ಅಂತೆ, ನಾನು ನೋಡಿರಲಿಲ್ಲ , ನಾನು...  ನಾನು... , ಈ ಕಥೆ ನಾಯಕ ಅಂತಾರೆ , ಮುಂದೆ ನಿಮ್ಗೆ ಗೊತ್ತಾಗುತ್ತೆ
ಇಡ್ಲಿ ಕುಕ್ಕರ್, ಪಂಪ್ ಸ್ಟೋವ್ವು, ಒಂದಿಷ್ಟು ಪಾತ್ರೆ ,ಮತ್ತೆ ಅವಳು ಇಷ್ಟೇ ಆಸ್ತಿ. ಅಂದ್ಹಾಗೆ ಅವನ ಎಂಟಾಣೆ ಇಡ್ಲಿ ನನಗೆ ಫ್ರೀ , ಏಕೆಂದರೆ ನಾನು..ನಾನು ಈ ಕಥೆಯ ನಾಯಕ ಅಂತೆ.

ಹದವಾದ ಹಬೆಯಲ್ಲಿ ಬೆಂದ ಅವನ ಇಡ್ಲಿಯ ರುಚಿ ಹತ್ತಿರದ ಸುಧಾ ಹೋಟೆಲ್ನಲ್ಲೂ ಸಿಗ್ತಿರ್ಲಿಲ್ಲ.
ತಾಲ್ಲೂಕು ಆಫೀಸ್ಗೆ ಬರೋ ಜನ್ರಲ್ಲಿ ಕೆಲವರು ಅವನ ಗಿರಾಕಿಗಳು. ಎಂಟಾಣೆ ರುಚಿಗೆ ಮಾರುಹೋದವರು. ಅವನೆಂದೂ ದೊಡ್ಡ ಬೆಲೆಯ ಗಾಂಧೀಜಿಯನ್ನು ನೋಡಿರಲಿಲ್ಲ. ಎಂಟಾಣೆ ಲಾಭದಿಂದ ಅವನ, ಅವಳ ಜೀವನ ನಡೀತಿತ್ತು, ನನ್ನದೂ ಕೂಡ, ಏಕೆಂದರೆ ನಾನು..ನಾನು ಈ ಕಥೆಯ ನಾಯಕ ಅಂತೆ.

ನಾನು ಬಾಲಾಜಿ ಟಾಕೀಸ್ನಲ್ಲಿ ಪೋಸ್ಟರ್ ಹಚ್ಚೋ ಹುಡ್ಗ,  ಅಂದ್ರೆ ಪೋಸ್ಟರ್ ಬಾಯ್. ನನ್ನನ್ನ ಅದೇ ಈ ಕಥೆ ನಾಯಕನನ್ನ ಹುಟ್ಸಿದ್ ಪುಣ್ಯಾತ್ಮ, ಯಾರೊಂತ ನಂಗೆ ಗೊತ್ತಿಲ್ಲ, ಹದ್ಮೂರು ವಯಸ್ಸಿನ ನಂಗೆ ಅವನ ಎಂಟಾಣೆ, ಟಾಕೀಸ್ ಚಿತ್ರಾನ್ನ ಮಾತ್ರ ಸರ್ವಸ್ವ. ನಂಗೆ  ಪೋಸ್ಟರ್ಗೆ ಗೊಂದು ಹಚ್ಚೋದು ಮಾತ್ರ ಗೊತ್ತು, ಹೊಟ್ಟೆ ಪಾಡು, ಬೇರೇನೂ ಗೊತ್ತಿಲ್ಲ. ಅವನ ಇಡ್ಲಿ ಬಂಡಿ ಮೇಲೆ ನನ್ನ ಸಿನಿಮಾ ಪೋಸ್ಟರ್ ಇರ್ತಿತ್ತು.
ಅವನೂ ಅವಳು  ಇಬ್ರೂ  ನನ್ನಂತೆ,ಆದ್ರೆ ಈ ಕಥೆ ನಾಯಕ ಮಾತ್ರ ನಾನೇ.

ಬಹಳ ದೂರದಲ್ಲಿ  ಒಂದು ಊರು , ಊರಿನ ರಸ್ತೆ ನಡುವಿನಲ್ಲಿ ಒಂದು ದೊಡ್ಡ ಕಲ್ಲು. ಅರ್ಧ ಭೂಮಿಯಲ್ಲಿ  ಹುದುಗಿ ಹೋಗಿತ್ತು.
ಆ ಕಲ್ಲು ಕೆಡವಿ ಇನ್ನ್ಯಾವನೋ ಅದರ ಮೇಲೆ ಇನ್ನೊಂದು ಕಲ್ಲಿಟ್ನಂತೆ; ಬಹಳ ದಿನಗಳಕಾಲ ವಿವಾದದ ಕೇಂದ್ರ ಬಿಂದು ಆಗಿದ್ದ ಕಲ್ಲನ್ನು "ಕತ್ತಿ" ಗುಂಪಿನ ಜನರು ಉರುಳ್ಸಿ  ಹಳೆಯ ಕಲ್ಲನ್ನೇ ಪುನರ್ ಪ್ರತಿಷ್ಠಾಪಿಸುವ ಕೆಲ್ಸಾ ಮಾಡಿದ್ರು, ಮಾಡಿದ್ರು... ಕಲ್ಲು ಉರುಳ್ತು , ತಲೆಗಳು  ಉರುಳುದ್ವು  , ಸರ್ಕಾರ ಉರುಳ್ತು... ಸರ್ಕಾರ ಬಂತು..ಉರುಳ್ತು... ತಲೆಗಳು  ಉರುಳುದ್ವು...ಉರುಳ್ತು.... ಕಾಲ ಉರುಳ್ತಾನೆ ಇದೆ, ಕಲ್ಲೂ ಇಲ್ಲ, ಬಾಂಧವ್ಯ ಮೊದ್ಲೇ ಇಲ್ಲ. ಇದನೆಲ್ಲಾ ನಿಮಗ್ಯಾಕೆ ಹೇಳ್ತಿದ್ದೀನಿ ಅಂದ್ರೆ, ನಾನು ..ನಾನು ಈ ಕಥೆಯ ನಾಯಕ ಅಂತೆ. .

"ನಾಳೆ ತೀರ್ಪು ಕೊಡ್ತಾರಂತೆ!!" "ಪೇಪೇರ್ನಲ್ಲಿ  ಹಾಕೊವ್ರೆ", ಎಂಟಾಣೆ ಮೇಯ್ತಿದ್ದ ಗಿರಾಕಿ ಹಲ್ಲು ಗಿಂಜಿದ....  ತೀರ್ಪು?!!!! ಎಂಟಾಣೆಯ ರುಚಿಗೆ ತಲೆ ಓಡ್ಲಿಲ್ಲ,...  ಅಲ್ಲೇ ಮೆತ್ತಿದ್ದ "ನ್ಯಾಯ ದೇವತೆ" ಪೋಸ್ಟರ್ ನೋಡಿದ್ಮೇಲೆ ಅರ್ಥ ಆಯ್ತು.ಮತ್ತೊಂದ್ ದೂರದ ಊರಿನ ಕರಿ ಕೊಟಿನ್ ಜನ್ರು, ಕೂತ್ಕೊಂಡ್ ಕೊಡೊ ತೀರ್ಪ್ಗೆ ತೀರ್ಪು ಅಂತಾರಂತೆ.... ಸುಮ್ಮನಾದೆ ... ನಾಲ್ಕಾಣೆ ಬಾಕಿ ಉಳಿದಿತ್ತು.
"ಪೇಪರ್ನಾಗೆ ಬಂದೈತಾ "? ಮತೊಬ್ಬ ಕಿವಿ ಕಚ್ಚಿದ... ಪೇಪರ್!! ನಂಗೆ ಗೊತ್ತಿದ್ದ ಪೇಪರ್... ಒಂದು ಸಿನ್ಮ ಪೋಸ್ಟರು , ಮತ್ತೊಂದು ಅವನು ಎಂಟಾಣೆಯನ್ನು ಕಟ್ಟಿಕೊಡಲು ಉಪಯೋಗಿಸ್ತಿದ್ದು.
ಅವನು ಸುಮ್ಮನಿದ್ದ , ನಾನು ಮತ್ತೆ ಸುಮ್ಮನಾದೆ, ನಾಲ್ಕಾಣೆ ಮುಗಿದಿತ್ತು.

ನಾಳೆ  ಆಯ್ತು, ತೀರ್ಪು ಹೊರಬಿತ್ತಂತೆ, ರಸ್ತೆ ಸತ್ತೋಗಿತ್ತು,  ಊರು ಕುದೀತಿತ್ತು, ಅವ್ನುನ್ನ ನೋಡ್ದೆ, ಹಿಟ್ ಕಲುಸ್ತಾ ಇದ್ದಾನೆ. ತೀರ್ಪಿನ ಮಾಹಿತಿ ಅವನಿಗೆ ತಿಳಿಯದೆ?... ಪಾಪ ನನ್ನಂತೆಯೇ... ಇವತ್ತು ಟಾಕೀಸು ಬಂದ್.  ಕಾಕ ಅಂಗಡಿ ಬನ್ನು ಹೊಟ್ಟೆ ತುಂಬಿಸಿತ್ತು. ಅವನ ಬಳಿಗೆ ಹೋಗಲಿಲ್ಲ, ಅವ್ನೂ ನನ್ನ ನೋಡ್ದ …ಆದ್ರೆ ಕರೀಲಿಲ್ಲ...

ಕಲ್ಲು ಯಾರಪ್ಪನ್ ಆಸ್ತಿನೋ ಗೊತ್ತಾಗ್ಲಿಲ್ಲ.ಕತ್ತಿ ಗುಂಪಿನವರೂ , ತಲ್ವಾರ್ ಗುಂಪಿನವರೂ ಹೊಡೆದದ್ಕೊಂದ್ರು,ಕೆಲವರು ಸತ್ತರು ..... ನಾನು ನೋಡಿದೆ... ಅವನೂ ನೋಡಿದ...
ಎಂಟಾಣೆಯ ಪ್ರಾಪ್ತಿಇಲ್ಲ ಅಂದ್ಕೊಂಡ್ನೋ  ಏನೋ? ಸ್ಟೋವ್ ಆರಿಸಿದ, ಪಾತ್ರೆಗಳನ್ನು ಚೀಲಕ್ಕೆ ಹಾಕಿಕೊಂಡು ಮನೆ ಕಡೆ ಹೋಗುತ್ತಿದ್ದಾನೆ.... ಅವನು ಮುಂದೆ... ನಾನವನ ಹಿಂದೆ..ವೇಗವಾಗಿ ನಡೆಯುತ್ತಿದ್ದಾನೆ?... ನಡೆಯುವ ವೇಗವು ಇದೆ ಏನೋ?, ಪೋಲಿ ಅಲೆಯುವ ನನಗೇನು ತಿಳೀಬೇಕು ...
ಅವನು ಓಡಿದ... ಮನೆಯ ಕಡೆಗೆ.. ಅವನ ಮನೆಯ ಕಡೆಗೆ...
ಮನೆ?? ಅಧೋ!! ಅಲ್ಲಿ .ರೈಲ್ವೆ ಸ್ಟೇಷನ್ ರಸ್ತೇ ಕೊನೇಲ್...ಹೊತ್ತಿಕೊಂಡು  ಉರೀತಿರೋ .. ಅಯ್ಯೋ!! ನಿಜ , ಅದೇ.. ಉರೀತಿರೋ  ಮುರುಕು ಮನೆಯ ಕಡೆಗೆ ಓಡಿದ...
ಹೊರಗಿನ ಚಿಲಕ ಹಾಕಿದೆ, ಬಾಗಿಲು ಕೆಂಡವಾಗಿದೆ, ಕೂಗಿದ..... ಚೀರಿದ..ನೀರೆರಚಿದ..ಮಣ್ಣು ತೂರಿದ....... ಇಲ್ಲ, ಅದು ಬೆಂಕಿಯಲ್ಲ, ಅದು ಬೇರೆ ಏನೋ.... ಬೆಂಕಿಯಲ್ಲ... ತನ್ನ ಮೂಲಭೂತವಾದ ಭೌತ ಶಕ್ತಿಯನ್ನು ನಿಸ್ಸಂದೇಹವಾಗಿ ಸಮರ್ಥಿಸಿಕೊಳ್ಳುತಿರುವ ಸ್ವಾರ್ಥಿ!!.
ಹತ್ತು ನಿಮಿಷವಾಯಿತು, ಅವನು ಕುಸಿದ , ನಾನು ನಿಂತಿದ್ದೆ, ಆ ಕ್ರೂರ ದೃಶ್ಯವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಲಿಲ್ಲವೇನೋ, ನಿಂತೇ ಇದ್ದೆ. ಖಾಕಿಯವರು ಬಂದರು, ಬೆಂಕಿ ಆರಿಸಿದರು.....
ಅವನು ಕೂತೆ ಇದ್ದ , ಇನ್ನಷ್ಟು ಕುಸಿದಿದ್ದ .... ಇಬ್ಬರು ಖಾಕಿಯವ್ರು ಒಳಕ್ಕೆ ಹೋಗಿ ಏನನ್ನೋ ಹೊತ್ತುಕೊಂಡು ಬಂದರು. ಅವನು ಇನ್ನಷ್ಟು ಕುಸಿದು ಹೋದ.ಅದು , ಅದು ಅದು..  ಅವಳಾ? ... ಇಲ್ಲ ಅವಳಲ್ಲ ,ಅವಳಿನಿಲ್ಲ. ಅವಳನ್ನು ಮೊದಲ ಸರ್ತಿ ನೋಡಿದೆ, ಛೆ!! ನೋಡ್ಬಾರ್ದಿತ್ತೇನೋ . ಅವನು ಕೊನೇ ಸಲ.

ಅವರಿವರ ಪುಂಡಾಟಕ್ಕೆ ಬಲಿಯಾದ ಮುಗ್ದ ಜೀವಗಳು ಅವಳು ಮತ್ತು ಅವನು;ಮತ್ತೇ ನಾನು?... ನಾನು ಹೌದು ನಾನೇ ಏಕೆಂದರೆ... ನಾನು ಈ ಕಥೆಯ ನಾಯಕ ಅಂತೆ.

ಅವನನ್ನು ಕಂಡೆ, ಎಂಟಾಣೆಯ ತಯಾರಿ ನಡೆಸುತ್ತಿದ್ದಾನೆ, ಹಿಟ್ಟು ಹದವಾಗಿದೆ, ಚಟ್ನಿ ನೀರಾಗಿದೆ.... ಎಲ್ಲ ಮರೆತಿರುವನೆ?... ಮನಸಿನಲ್ಲಿ ಏನೋ ಸಂದೇಹ... ಪಾತ್ರೆ ಇಟ್ಟು ಸ್ಟೋವ್ ಹಚ್ಚಿದ,
ಬೆಂಕಿ!!! ಅಯ್ಯೋ.. ಹೌದು, ಇದೇ ಬೆಂಕಿ... ಆದರೆ.. ಆದರೆ..ಕ್ರೂರ ದ್ವೇಷದ ದಳ್ಳುರಿಯಲ್ಲ, ಮೂಲಭೂತ ಭೌತ ಶಕ್ತಿಯ ಸ್ವಾರ್ಥಿಯಲ್ಲ... ಮಾನವನ ವಿಕಾಸವಾದವನ್ನು ಪ್ರತಿನಿಧಿಸುವ ಶಕ್ತಿಯಾಗಿದೆ..ಪಂಚಭೂತಗಳಲ್ಲಿ ಒಂದಾಗಿದೆ.. ಹೌದು ಇದೇ ಬೆಂಕಿ!!.. ಈ ಜಗತ್ತನ್ನು  ಚಲನೆಯಲ್ಲಿಟ್ಟುರುವ ಅಗೋಚರ ಶಕ್ತಿ... ನಾವು ಪೂಜಿಸುವಂತ್ತದ್ದು... ಹೌದು ಇದೇ ಬೆಂಕಿ!!.. ಆದರೆ... ಆದರೆ.. ಮುಚ್ಚಿದ ಕೆಂಡವಲ್ಲ,ಮನಸಿನ್ನಲ್ಲಿ ಹುದುಗಿರುವ ಘೋರ ಜ್ವಾಲಾಮುಖಿಯಲ್ಲ ... ಇದೇ ಬೆಂಕಿ!!..
ಬಂಡಿ ಹತ್ರ ಹೋದೆ , ಎರೆಡು ಎಂಟಾಣಿ ಕೊಟ್ಟ, ಒಂದು ತುತ್ತು ತಿಂದೆ, ಅರೆ ಥೂ!!!, ಇನ್ನೂ ಹಿಟ್ಟು, ಹಸಿ..ಉಗಿದೆ.."ಇನ್ನೂ ಸರ್ಯಾಗಿ ಬೆಂದಿಲ್ಲ", ಅವನು ಮಾತನಾಡಲಿಲ್ಲ. ಹನ್ನೆರಡಾಣೆಯನ್ನು ತಿಪ್ಪೆಗೆ ಎಸೆದು ಟಾಕೀಸ್ ಕಡೆ ಹೊರಟು ನಿಂತೆ..
ಅವನನ್ನು ನೋಡಿದೆ, ಬೆಂಕಿಯೆಡೆಗೆ ನೋಡುತ್ತಿದ್ದಾನೆ, ಅವನ ಮನಸ್ಸಿನ ಹೋಯ್ದಾಟಗಳು ನನಗೆ ತಿಳಿಯುವುದಿಲ್ಲ, ಅಲ್ಲಿ ನಿರಾಸೆಯ ಕಡಲಿರಬಹುದೇ?, ಉರಿಯಿವ ಜ್ವಾಲಮುಖಿಯಿರಬಹುದೇ?...
ಹೊರಟು ನಿಂತ ನನ್ನನ್ನು ದಿಟ್ಟಿಸಿ ನೋಡಿ ಹೇಳಿದ , " ಸಾಕಷ್ಟು ಬೆಂದಿದೆ" ಎಂದ.ಮುಂದೆ ಮಾತಾಡಲಿಲ್ಲ.

ನಾನು ಅಲ್ಲಿಂದ ಹೊರಟೆ, ಹತ್ತು ಹೆಜ್ಜೆ ಇಟ್ಟ ನಂತರ, ಅವನು ಹೇಳಿದ ಮಾತನ್ನು ಆಲೋಚಿಸುತ್ತಿದೇನೆ..." ಸಾಕಷ್ಟು ಬೆಂದಿದೆ"... ಅವನು ಹೇಳಿದ್ದು ಇಷ್ಟೇ... ಆದರೆ... ಹೇಳಿದ್ದು..ಇಡ್ಲಿಯ ಬಗ್ಗೆಯೂ?... ಅವಳ ಬಗ್ಗೆಯೂ?...ಅಥವಾ ಅವನ ಘಾಸಿಯಾದ ಮೃದು ಮನಸಿನ ಬಗ್ಗೆಯೂ ?...ಸರಿಯಾಗಿ ತಿಳಿಯುತ್ತಿಲ್ಲ.. ಕಣ್ಣು ಮಂಜಾಗುತ್ತಿದೆ..ಸುಸ್ತಾಗಿರಬೇಕು..ಇಲ್ಲ!! ಆ ಸ್ಪಷ್ಟತೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹದಿಮೂರವನಾದ ನನಗೆ ಇಲ್ಲವೆನಿಸುತ್ತಿದೆ.
ತಿರುಗಿ ನೋಡಿದೆ, ಅವನು ಅಲ್ಲೇ ನಿಂತಿದ್ದಾನೆ ... ಬೆಂಕಿಯ ಮುಂದೆ.ಹೌದು ... ನಿಜ...ಅದು ಬೆಂದಿದೆ.... ಇನ್ನೂ ಬೇಯುತ್ತಿದೆ..ಆದರೆ ಇನ್ನೆಷ್ಟು ಜೀವಗಳೋ ?
ಅರ್ಥವಾಗುತ್ತಿಲ್ಲ...
ನಾನು ನಾನು ಈ ಕಥೆಯ ನಾಯಕ  ಅಲ್ಲ ನಾನು ಸ್ವತಂತ್ರ ಭಾರತದ ಅನಾಥ ಪ್ರಜೆ.